ಅಪಸ್ವರಗಳು

March 10, 2008 at 7:29 am | In ಕನ್ನಡ ಸಾಹಿತ್ಯ | Leave a Comment
Tags: , , , , ,

ಈ ಕಳೆದ ಎರಡು ವಾರಗಳಿಂದ ಇಲ್ಲಿನ ಸಂಗೀತ ಸಭೆಯಲ್ಲಿ ಈ ವರ್ಷದ ಕಚೇರಿಗಳು ನಡೆಯುತ್ತ ಬಂದಿವೆ. ಆ ಕಚೇರಿಗಳಿಗೂ ಈ ಕೆಳಗಿನ ಕಾವ್ಯಕ್ಕೂ ಸಂಬಂಧವಿಲ್ಲವೆಂದೇ ತಿಳಿಯೋಣ :)

ಇಂದು ಇದನ್ನ ಓದಿದಾಗ ಅದೇಕೋ ಮನಸ್ಸಿಗೆ ತಟ್ಟಿತು… ಈ ಕವನದಲ್ಲಿ ಸೌಂದರ್ಯವೇನಿಲ್ಲ. ನವರಸಗಳಲ್ಲಿ ಒಂದನ್ನು ಹುಡುಕಿ ಹೇಳುವುದಾದರೆ ಇಲ್ಲಿ ಬೀಭತ್ಸ ರಸವೇ ಪ್ರಧಾನವೆನ್ನಬೇಕು. ಹುಳುಗಳ ಗಿಜಿಗಿಜಿ, ಹುಚ್ಚನ ಚೀರಾಟ, ಮೂಕಪ್ರಾಣಿಯ ಚೀತ್ಕಾರ, ಏನೂ ತಿಳಿಯದ ಹಸುಗೂಸಿನ ಮೇಲೆ ಕಾಲಿಡುವುದು – ಅಬ್ಬಾ ಎಷ್ಟು ಅಸಹ್ಯ! ಕವನವನ್ನು ಓದುವಾಗ ಮುಷ್ಠಿಯನ್ನು ಬಿಗಿಹಿಡಿದು, ಕಣ್ಣುಕಿವಿಗಳನ್ನು ಮುಚ್ಚಿಕೊಳ್ಳಬೇಕೆಂಬ ಭಾವನೆ. ಹಾಗೆಯೇ ಅಲ್ಲಿಲ್ಲಿ ಸ್ವಲ್ಪ ಕರುಣಾರಸವೂ ಕಂಡುಬರುತ್ತೆ.

“ನವ್ಯಧ್ವನಿ” ಕವನ ಸಂಕಲನ, ಸಂಪಾದಕರು: ಶ್ರೀ ವಿ ಕೃ ಗೋಕಾಕ, ಶ್ರೀ ಚೆನ್ನವೀರ ಕಣವಿ. ಪ್ರತಿಭಾ ಗ್ರಂಥಮಾಲೆ (ಧಾರವಾಡ). ೧೯೫೬.

ಅಪಸ್ವರಗಳು

ಕತ್ತಲಲ್ಲಿ, ಕಗ್ಗತ್ತಲಲ್ಲಿ
ಯಾರೋ ಕರಗಸಕ್ಕೆ ಅರ್ನವನ್ನು ಗೀಚುತ್ತಿದ್ದರಯ್ಯಾ !
ರಾಮ ರಾಮಾ !
ಯಾರೋ ಮಲಗಿದ್ದ ಕೂಸಿನ ಮೇಲೆ ಕಾಲಿಟ್ಟರಯ್ಯಾ !
ಭಗವಂತಾ !
ಕುತುಬಮಿನಾರದ ತುತ್ತತುದಿಯಿಂದ ಕೆಳಗುರುಳಿದರಯ್ಯಾ !
ಕಾಮಿಯ ಮರಿ ಕಣ್ಮುಚ್ಚಿ ಕುಳಿತ ಬೆಚ್ಚನೆಯ ಒಲೆಯಲ್ಲಿ
ಕಿಚ್ಚು ಸುರಿದರಯ್ಯಾ !

ಅಯ್ಯೋ ! ಮೂಕಪ್ರಾಣಿಯ ಚೀತ್ಕಾರ !
ನಿಶ್ಶಬ್ದ ನೀರವ ರಾತ್ರಿಯಲ್ಲಿ
ಆಸ್ಪತ್ರೆಯ ನಿಶ್ಶಬ್ದ ಮಂಚಗಳ ಸಾಲಿನಲ್ಲಿ
ಕನಸುಕಂಡ ಹುಚ್ಚನೊಬ್ಬ ದಿಗ್ಗನೆದ್ದು ಚಿಟ್ಟನೆ ಚೀರಿದನಯ್ಯಾ !
ಪ್ರಚಂಡವಾದ ಬಂಡೆಗಲ್ಲಿನ ನುಣುಪು ಅಂಚಿಗೆ ಒರಗಿ
ಆಳವಾದ ಕಣಿಯ ಕೆಳಕ್ಕೆ ನೋಡುತ್ತಿರೆ
ಅಲ್ಲೊಂದು ಗಿಜಿಗಿಜಿಗುಡುವ ಹುಳಗಳ ಕೊಳ !
ಆ ಹುಳಗಳಲ್ಲಿ ನಾನೂ ಒಂದು ಹುಳ !
ಹುಳವ ಕಂಡು ಹುಳುವಾದ ನನ್ನ ಮೈ ಗಿಜಿಗಿಜಿಯೆನ್ನತೊಡಗಿತು,
ಬೆವರಿನಿಂದ ! ನವಿರಿನಿಂದ !
ತಾಯ ಕಣ್ಣಿನ ಬೆಚ್ಚನೆಯ ಹನಿಯೊಂದು
ತಣ್ಣೀರು ಮೀಯುತಿಹ ಗೋಪೀಚಂದನ ಮೇಲೆ ಬೀಳೆ
ಅದಾವ ದಾಹ !
ಅದೆಂಥ ನೋವು !

ಯಾರೋ, ಯಾವ ಜನ್ಮದಲೊ
ಕಂಡ ಕನಸಿನ
ಉಂಡ ನೋವಿನ
ಪಡೆದ ಪರಿತಾಪದ
ನಿರುಶ್ಶಾಪ ಪಾಪದ
ಅದೃಶ್ಯ ತೆರೆಯೊಂದರ ಸುಳಿಗೆ ಸಿಲುಕಿದೆ ನಾನಯ್ಯಾ !
ನನ್ನ ಎಷ್ಟು ಜನ್ಮದ ಶಾಂತಿಯನ್ನು ತೆತ್ತು
ಆ ಅನಂತ ಶಾಪವನು ಹಿಂಗಿಸಬಲ್ಲೆನು,
ಗುರುವೆ ?

ಶಂ. ರಾ. ಮೊಕಾಶಿ (ಪುಣೇಕರ)

ಕೆಲವು ಪದಗಳ ಅರ್ಥ:

ಕಾಮಿ – ಹೆಣ್ಣು ಬೆಕ್ಕು
ನೀರವ – ಮೌನ (ರವವೆಂದರೆ ಸದ್ದು – ಅಲ್ಲಿಂದ ಬಂದದ್ದಿರಬೇಕು)

{ निर् रवम् इत्यत्र रो रीति सूत्रात् रेफस्य रेफे परे लोपः। नि रवम् इति प्राप्ते। ढ्रलोपे पूर्वस्य दीर्घोऽण इति सूत्रादस्मिन् रेफलोपप्रकरणे रेफस्य पूर्ववर्णस्य इकारस्य दीर्घः।नीरवम्।}

ಕಣಿ – (ಇಲ್ಲಿ) ತಗ್ಗು, ಕಂದಕ

ಎಷ್ಟೋ ದಿನಗಳಿಂದ ಓದಬೇಕೆಂದಿಟ್ಟುಕೊಂಡಿರುವ ವಿಷಯ: ನವ್ಯಕಾವ್ಯವೆಂದರೇನು? ಈ ಸಂಕಲನದ ಪೀಠಿಕೆಯಲ್ಲಿ ಗೋಕಾಕರು ಯಾವ ಕವನಗಳಲ್ಲಿ ಅರ್ಥಕ್ಕೆ ಪ್ರಾಧಾನ್ಯವಿಲ್ಲದೆ ಕೇವಲ ಪ್ರತೀಕಕ್ಕೆ ಮಾತ್ರ ಪ್ರಾಧಾನ್ಯವಿದೆಯೋ ಅವು ನವ್ಯಶೈಲಿಯ ಕವನಗಳು ಎಂದು ವಾದಿಸುತ್ತಾರೆ. ಈ ಮೇಲಿನ ಕವನದಲ್ಲೂ ಅರ್ಥಕ್ಕೆ ಸ್ವಲ್ಪ ಹೆಚ್ಚಾದ್ದೇ ಆದ ಪ್ರಾಧಾನ್ಯವಿದೆ, ಇನ್ನೂ ಸ್ವಲ್ಪ ಸಂಯಮ ಇರಬೇಕಿತ್ತು ಎಂಬುದು ಅವರ ಅಭಿಪ್ರಾಯ. ಈ ವಿಷಯವಾಗಿ ಹೆಚ್ಚಿನ ಅಧ್ಯಯನಕ್ಕೆ ಸಮಯ ಸಿಕ್ಕರೆ, ಮುಂದೆ ಮತ್ತೊಂದು ಲೇಖನವನ್ನು ಬರೆಯಬಹುದೇನೋ.

Blog at WordPress.com. | Theme: Pool by Borja Fernandez.
Entries and comments feeds.